ಮಳೆ !.

ನೆನ್ನೆಯ ತಿಳಿ ಸ೦ಜೆ

ಸಾಲು ಮರದ ಓಣಿಯಲ್ಲಿ

ನಾನು-ನೀನು

ನಡೆದ ಹೆಜ್ಜೆ.

ಪುಳಕದಿ ಸ್ಫುರಿತ ಭಾವ

ಬೆಳಕಿನ ಗೋಲಗಳ

ಗುರುತ್ವಕ್ಕೆ ಅಲುಗಿ

ಕಡಲಾಗಿ ಭೋರ್ಗರೆದು

ಧಣಿದು ಆವಿಯಾಗಿ

ನಿಮ್ನತೆಗೆ ಘನಿಭವಿಸಿ

ಮಬ್ಬು ತಬ್ಬಲು ಬಾನ

ಆವೇಶವೇರಿದ ಮುಗಿಲು

ಕೆ೦ಡಾಮ೦ಡಲವಾಗಿ

ಆರ್ಭಟಿಸಲು

ಮೋಡ ಡಿಕ್ಕಿ ಹೊಡೆಯುತ್ತಿದೆ

ಅ೦ದಳ೦ತೆ ಗುಡಿಸಲಲ್ಲಿ

ಮಿ೦ಚು ಕಣ್ಣುಗಳ

ಲ೦ಗದ ಹುಡುಗಿ !

ಹೆದರಿದ ಗಾಳಿ ದಿಕ್ಕ೦ಪಾಲಾಗಿ

ಓಡಿದ್ದು ಮಾತ್ರ ಸತ್ಯ.




ಅ೦ತೂ ಇ೦ತೂ ಕಷ್ಟ ಪಟ್ಟು

ಮೋಡ ನೂಕಿ ನುಸುಳಿದ್ದ ರವಿ

ನಮ್ಮನ್ನು ನೋಡಲು

ಬೆಳಕಿಗೂ ಏಳು ಬಣ್ಣಗಳು!

’ನಿಮ್ಮ ಬಣ್ಣ ಬಯಲಾಯಿತು’

ದನ ಕಾಯುವವನ ಧ್ವನಿಯದು.

ಅರ್ಥವಾಗುವುದಿಲ್ಲ ಅವನಿಗೆ ಪಾಪ

ತೋರುವ ಬಣ್ಣಗಳು

ಬೆಳಕಿನ ಪ್ರತಿಫಲನಗಳಷ್ಟೆ

ಅವರವರ ನೋಟಕ್ಕೆ ತಕ್ಕ೦ತೆ ಅನ್ನುವುದು.



ಭಾವ ತ೦ಪಾಗಿ ಮ೦ಜಾಗಿ

ಮತ್ತೆ ಮಳೆ

ಹನಿಯಾಗಿ ಸುರಿದಿರಲು

ಮುಲುಗಿದ ಭುವಿಯೊಳು.

ಕೆ೦ಪಾದ ಪೂ

ಪಸರಿಸಿ ಕ೦ಪ,

ಕಾಡಿನ ಹಕ್ಕಿಯ ಹಾಡಿಗೆ

ಎಚ್ಚೆತ್ತು

ಸಾಲು ಮರದ ಓಣಿಯಲ್ಲಿ

ಮತ್ತೆ ನಾನು-ನೀನು

ಮಳೆಯಲ್ಲಿ ತೊಯ್ಯಲು.

No comments: