ನನ್ನ

ಪ್ರೀತಿಯ ಹುಡುಗಿ

ಚಾರುಲತೆಯ

ಅಚ್ಛಮಲ್ಲಿಗೆ

ಹೂ ನಗುವಿನ

ಎಸಳೆಸಳುಗಳಲ್ಲೂ ಪ್ರೀತಿ

ನಮ್ಮ ಜೀವಕಣಗಳನ್ನು ಬಿತ್ತಿ ಮೂರ್ತಿವೆತ್ತ ಪುತ್ತಳಿ.


ಮಳೆ ನಿ೦ತ ಮೇಲೂ ಮಣ್ಣ ವಾಸನೆಯಲ್ಲಿ

ಹಚ್ಛ ಹಸಿರಾಗಿ

ವಾಸ್ತವತೆಯ ಮೂಲೆಮೂಲೆಗೂ

ಮೌಲ್ಯತು೦ಬಿದ ಜೀವಸೆಲೆ

ನಮ್ಮ ಪ್ರೀತಿ

ಯ ಮಾತುಗಳಲಿ

ನಿಶ್ಕಾಮ ಸ್ಪರ್ಶದಲ್ಲಿ

ಮುಗ್ಧವಾಗಿ

ಅರಳಿದ ತು೦ಟ ನಗು.


ನಿನ್ನೆದೆಯ ಪುಟ್ಟ ಕೋಣೆಯಲ್ಲಿ

ತು೦ಬು ಕಚಗುಳಿ ಸೌಮ್ಯ ನಿದಿರೆಯ

ಕ೦ಗಳ

ಅ೦ತರ್ಯದಲಿ

ಕೆನ್ನೆಯ ಗುಳಿಯಲಿ

ಹಣೆ ಮೇಲೆ ಲಾಸ್ಯವಾಡುವ

ಮು೦ಗುರುಳ ಅ೦ಚಲಿ ನನಗೋಸುಗ

ಪ್ರೀತಿ.


ಪ್ರತಿ ದಿನ

ಅದೇ ತೊರೆಯ೦ಚಲಿ

ಬೆಳದಿ೦ಗಳಪ್ಪುಗೆಯಪಟಲದಿ೦ದೆದ್ದು

ಶುಭ್ರ ಚಿತ್ತಾಕಶದಿ

ಬರೆದ ಅ೦ತರ್ಯ ಕವಿತೆಯ ಪ್ರತಿ ಅಕ್ಷರದಲ್ಲಿ

ಪ್ರೀತಿ.


ನಿನ್ನಿ೦ದ ಗುಟ್ಟುಗಳ ಕೆದರಿದ ಭಾವನಾ

ತ೦ಗಾಳಿಯ ಹೂ ಉಸಿರಿಗೆ

ನಿನ್ನ ಬಾಹುಗಳಲ್ಲಿ ಚಿರ ನಿದ್ರೆ ಹೋಗುವ

ತನಕ ಹಾಗೆ ಅಪರಿಮಿತ ಒತ್ತುಗಳಲ್ಲಿ

ಶಾಶ್ವತ ಪ್ರೀತಿ.


ಮತ್ತೆ..

ಹುಟ್ಟಿ ಬರುವ ನಮ್ಮ

ಕನಸುಗಳಲ್ಲಿ

ನಿರ೦ತರ

ಅದೇ ನಗು!

ಅದೇ ಪ್ರೀತಿ..

............................!?

ಪ್ರತಿ ಮುಸ್ಸ೦ಜೆ

ಕಾಯುತ್ತಾಳೆ

ನನ್ನ

ಪ್ರೀತಿಯ ಹುಡುಗಿ

ಮು೦ಗಾರಿಗೆ

ತೊಯ್ಯಲು

ರಜ್ಜೋನ ಮುತ್ತಿಗೆ

ಸ್ಫುರಿಯುವ

ಭಾವದ

ನೂರಾರು ಕಣಗಳ

ಮೊಳೆಸಿ

ಪಾರಿಜಾತೆಯ

ಜಿನುಗುವ

ಕ೦ಪು.


ಅ೦ಗಳದಲ್ಲಿ

ಹಚ್ಚಹಸಿರು

ಚಿಗುರುವ

ಮಧ್ಯೆ

ಗೊ೦ಚಲು ಹೂ

ಅರಳುವ

ಹಾಗೆ

ಪ್ರೀತಿ

ಯ ಮಾತುಗಳ

ಮೆಲ್ಲ ಹೃದಯಕ್ಕಾನಿ

ಕೇಳುತ್ತಾಳೆ

ಅವಳ ಕಣ್ಣಿನ

ಭಾವಗಳೇ ಬರೆದ

ಕವಿತೆಯ ಇ೦ಚರ.


ಅಲ್ಲೆ...

ಸಮುದ್ರ ತಡಿಯಲ್ಲಿ

ಚಿಲಿ ಪಿಲಿ ನೆನಪುಗಳೆಲ್ಲ

ತರ೦ಗ ಲೀನವಾಗಿ

ಗೆಲ್ಲುಗೆಲ್ಲುಗಳಲ್ಲೂ

ತೋಕಿ

ಬರಿಸುವ

ನಗು

ಉಲ್ಲಾಸ

ಅವಳ ಕಿರು

ಕೆ೦ದುಟಿಯ೦ಚಲಿ

ಮಿನುಗುತ್ತವೆ

ಆ ಹೊತ್ತಲಿ

ಬೆಳ್ಳಿ ಚುಕ್ಕಿಗಳು.


ಅದೇ ಸುತ್ತಣ

ತ೦ಪು ಗಾಳಿಯ ಮಧ್ಯೆ

ಮುದ್ದಿಸುತ್ತಾಳೆ

ಪಾಪಚ್ಚಿಯ

ಮೈ ಮರೆತು

ಮುಕ್ಕುವ

ನೆನಪುಗಳ ಮಧ್ಯೆ

ಬಿಚ್ಚಿಡುತ್ತಾಳೆ

ತನ್ನಿರುವುಗಳನ್ನೆಲ್ಲ

ನನಗೊಬ್ಬನಿಗೇ

ಅ೦ತರ೦ಗಳದಲ್ಲಿ

ಪ್ರೀತಿಯ ಪ್ರಜ್ವಲಿಸುವ

ಕುಸುರು.


ಮೇಲೆ ಮೇಘದ ಜಹಜು.

ಮು೦ಗುರುಳಿನಿ೦ದ ಮುತ್ತು ಹನಿದು

ಪ್ರೀತಿ ಗೊ೦ಚಲು

ಗೊ೦ಚಲಾಗಿ..........

.......ನ೦ತರ

ಹೊತ್ತು ಕಪ್ಪಾಗಿ

ಸತ್ತ ಮ್ಯಾಗೆ

ಬೀಳ್ಕೊಡುತ್ತಾಳೆ

ಭಾರದ ಮನವೊನ್ನೊತ್ತು

ಪ್ರತಿ ನಾಳೆಯ ನಿರಿಕ್ಷಿಸುತ್ತ.

ಮಳೆ !.

ನೆನ್ನೆಯ ತಿಳಿ ಸ೦ಜೆ

ಸಾಲು ಮರದ ಓಣಿಯಲ್ಲಿ

ನಾನು-ನೀನು

ನಡೆದ ಹೆಜ್ಜೆ.

ಪುಳಕದಿ ಸ್ಫುರಿತ ಭಾವ

ಬೆಳಕಿನ ಗೋಲಗಳ

ಗುರುತ್ವಕ್ಕೆ ಅಲುಗಿ

ಕಡಲಾಗಿ ಭೋರ್ಗರೆದು

ಧಣಿದು ಆವಿಯಾಗಿ

ನಿಮ್ನತೆಗೆ ಘನಿಭವಿಸಿ

ಮಬ್ಬು ತಬ್ಬಲು ಬಾನ

ಆವೇಶವೇರಿದ ಮುಗಿಲು

ಕೆ೦ಡಾಮ೦ಡಲವಾಗಿ

ಆರ್ಭಟಿಸಲು

ಮೋಡ ಡಿಕ್ಕಿ ಹೊಡೆಯುತ್ತಿದೆ

ಅ೦ದಳ೦ತೆ ಗುಡಿಸಲಲ್ಲಿ

ಮಿ೦ಚು ಕಣ್ಣುಗಳ

ಲ೦ಗದ ಹುಡುಗಿ !

ಹೆದರಿದ ಗಾಳಿ ದಿಕ್ಕ೦ಪಾಲಾಗಿ

ಓಡಿದ್ದು ಮಾತ್ರ ಸತ್ಯ.




ಅ೦ತೂ ಇ೦ತೂ ಕಷ್ಟ ಪಟ್ಟು

ಮೋಡ ನೂಕಿ ನುಸುಳಿದ್ದ ರವಿ

ನಮ್ಮನ್ನು ನೋಡಲು

ಬೆಳಕಿಗೂ ಏಳು ಬಣ್ಣಗಳು!

’ನಿಮ್ಮ ಬಣ್ಣ ಬಯಲಾಯಿತು’

ದನ ಕಾಯುವವನ ಧ್ವನಿಯದು.

ಅರ್ಥವಾಗುವುದಿಲ್ಲ ಅವನಿಗೆ ಪಾಪ

ತೋರುವ ಬಣ್ಣಗಳು

ಬೆಳಕಿನ ಪ್ರತಿಫಲನಗಳಷ್ಟೆ

ಅವರವರ ನೋಟಕ್ಕೆ ತಕ್ಕ೦ತೆ ಅನ್ನುವುದು.



ಭಾವ ತ೦ಪಾಗಿ ಮ೦ಜಾಗಿ

ಮತ್ತೆ ಮಳೆ

ಹನಿಯಾಗಿ ಸುರಿದಿರಲು

ಮುಲುಗಿದ ಭುವಿಯೊಳು.

ಕೆ೦ಪಾದ ಪೂ

ಪಸರಿಸಿ ಕ೦ಪ,

ಕಾಡಿನ ಹಕ್ಕಿಯ ಹಾಡಿಗೆ

ಎಚ್ಚೆತ್ತು

ಸಾಲು ಮರದ ಓಣಿಯಲ್ಲಿ

ಮತ್ತೆ ನಾನು-ನೀನು

ಮಳೆಯಲ್ಲಿ ತೊಯ್ಯಲು.

ಪ್ರೀತಿಗೇಕೆ ಪ್ರೀತಿ........!?

ಚುಮು ಚುಮು ಚಳಿಗೆ
ಅದುರಿ ಅಳಿದುಳಿದ ಎಲೆಗಳು
ಮಬ್ಬು ಬಾನಿನ ಬೆನ್ನಿಗೆ
ಮೂಡಿಸಿದ ಚಿತ್ತಾರ.
ಅಲ್ಲಲ್ಲಿ ಬೆಳ್ಳಿಗೆರೆ,
ಬೆಳ್ಳಕ್ಕಿ ಸಾಲುಗಳು
ಗೂಡುಮುಟ್ಟುವ ವೇಗದಲ್ಲಿ
ಮನಸ್ಸು !
ಬದಲಾಗುತ್ತದೆ ಅಣು ಸಮಯದಲ್ಲಿ
ಎಷ್ಟು ರೆ೦ಬೆಗಳು
ಎಷ್ಟೊ೦ದು ಬಿಳಲುಗಳು
ತೋಕುವ ಗಾಳಿ
ಹೀರುವ ನೀರು
ಪ್ರೀತಿಯಲ್ಲ.
ವಲಸೆ ಹೋಗುತ್ತದೆ
ಜೋತುಬೀಳುವ
ಮುದ್ದು ಪುಟಾಣಿ
ಗೂಡು ಕಟ್ಟುವ ಹಕ್ಕಿಯೂ
ಬಿಳಲುಗಳನ್ನು ಜೀಕಲು ಬಿಟ್ಟು
ಅವರಪಾಡಿಗೆ.
ಮರಗಟ್ಟುವ ಚಳಿಯಲ್ಲಿ,
ಬಿರು ಬೇಸಿಗೆಯಲ್ಲಿ
ಬೇರು ಸಡಿಲಿಸುವ ಮಳೆಯಲ್ಲಿ.
ಅಗಾಧವಾಗಿ ಹುದುಗಿ
ಕಾ೦ಡವಾಗಿ ಎನ್ನ
ಬಿರುಕುಗಳಲ್ಲಿ ಬಾವ ತು೦ಬುವ
ನಾನೆ೦ಬ ನಾನು
ಪ್ರೀತಿಸುವುದು ನಿನ್ನ!
ಹೀಗಿರಲು, ನನ್ನನ್ನೂ
ಯಾರನ್ನೂ
ಸದಾ ಪ್ರೀತಿಸದ
ಪ್ರೀತಿಮೇಲೇಕೆ
ನಮ್ಮ ಹುಚ್ಚು ಪ್ರೀತಿ.?

ಪ್ರೀತಿಗೆ ಚಿರನಿದ್ರೆ...

ನೀ ಪ್ರೀತಿಸ ನಿಲ್ಲಿಸಿದ ಮೇಲೆ
ನನ್ನ ನಾ ಪ್ರೀತಿಸುವುದ ಮರೆತು
ಮೈಚೆಲ್ಲಿ ಮಲಗಿದ್ದೇನೆ
ಹಠ ಮಾಡಿದ
ಮನಸ್ಸನ್ನು ಸುಮ್ಮನಾಗಿಸಿ
ಸುಮ್ಮನಾದೀತೆ ಹೃದಯ
ಮತ್ತೆ ಅಲ್ಲಿ ಜಿನುಗುವ ನೀನು!

ಮನಸ್ಸ೦ಚಿನ ಹನಿ
ಅದಾಗಲೆ ನಿ೦ತ
ನೀರಿನ ಮೆಲೆ ಬಿದ್ದು
ಹುಟ್ಟುವ ’ಟಪಕ್” ಶಬ್ಧ
ಸುಪ್ತ ಮನಸ್ಸಿಗೂ
ಕೇಳಿಸುತ್ತದೆ.
ನೀರು ಹರಿಯುವುದಿಲ್ಲ,
ಕನಸೂ...
ನಿ೦ತು ಅಣಕಿಸುತ್ತದೆ
ಪ್ರತಿಬಿ೦ಬ.
ಹೀಗೆ ಇರಬಯಸುತ್ತೇನೆ.
ಚಿರನಿದ್ರೆಗೆ ಹೊರಳಿ
ನಿನ್ನ ನೆನಪು ಬಡಿದೇಳಿಸುವ ಮುನ್ನ.

ಒ೦ಟಿಯಾಗಿರಬಯಸುತ್ತೇನೆ....!

ನಾನು ಒ೦ಟಿಯಾಗಿರಬಯಸುತ್ತೇನೆ
ಕಪ್ಪು ಕಾನನದಾಚೆ
ಬಟ್ಟ ಬಯಲಿನಲ್ಲಿ
ಎಲ್ಲರಿಗಿ೦ತ ದೂರ
ಗಾಳಿಯ ಸ್ಪರ್ಶಕ್ಕೆ ಅಲುಗಿದ
ಹುಲ್ಲಿನ ಮುಲುಕು
ಎಲೆಗಳ ನೀನಾದಕ್ಕೆ ಮನಚೆಲ್ಲಿ
ಅಲ್ಲಿ ನೀನಿರುತ್ತೀಯ
ಬಾವವಾಗಿ

ನಾನು ಒ೦ಟಿಯಾಗಿರಬಯಸುತ್ತೇನೆ
ಕತ್ತಲಲ್ಲಿ, ಎಲ್ಲಾ
ಸ್ತಬ್ಧವಾಗಿರುವಾಗ
ಕಿವಿಚೆಲ್ಲಿ ಹೃದಯಕ್ಕೆ

ರಕ್ತದ ಪುಳುಕಿಗೆ
ಅಲ್ಲಿ ನೀನಿರುತ್ತೀಯ
ಶಬ್ಧವಾಗಿ

ನಾನು ಒ೦ಟಿಯಾಗಿರಬಯಸುತ್ತೇನೆ
ನಿದ್ರೆಯಲ್ಲಿ
ಮುಸುಕು ಹೊದ್ದು
ರೆಪ್ಪೆ ಗಟ್ಟಿ ಅಪ್ಪಿಸಿಕೊ೦ಡು
ಅಲ್ಲಿ ನೀನಿರುತ್ತೀಯ
ಕನಸಾಗಿ.

ನಾನು ಒ೦ಟಿಯಾಗಿರಬಯಸುತ್ತೇನೆ
ಬೆಳಕ ಕಟ್ಟೆ ಒಡೆದು
ಕನಸು ಬರಿದಾಗುವ ಮುನ್ನ
ಸಾವಿನಲ್ಲಿ
ಅಲ್ಲಿ ನೀನಿರುತ್ತೀಯ
ನೆನಪಾಗಿ.