ಪ್ರೀತಿಗೇಕೆ ಪ್ರೀತಿ........!?

ಚುಮು ಚುಮು ಚಳಿಗೆ
ಅದುರಿ ಅಳಿದುಳಿದ ಎಲೆಗಳು
ಮಬ್ಬು ಬಾನಿನ ಬೆನ್ನಿಗೆ
ಮೂಡಿಸಿದ ಚಿತ್ತಾರ.
ಅಲ್ಲಲ್ಲಿ ಬೆಳ್ಳಿಗೆರೆ,
ಬೆಳ್ಳಕ್ಕಿ ಸಾಲುಗಳು
ಗೂಡುಮುಟ್ಟುವ ವೇಗದಲ್ಲಿ
ಮನಸ್ಸು !
ಬದಲಾಗುತ್ತದೆ ಅಣು ಸಮಯದಲ್ಲಿ
ಎಷ್ಟು ರೆ೦ಬೆಗಳು
ಎಷ್ಟೊ೦ದು ಬಿಳಲುಗಳು
ತೋಕುವ ಗಾಳಿ
ಹೀರುವ ನೀರು
ಪ್ರೀತಿಯಲ್ಲ.
ವಲಸೆ ಹೋಗುತ್ತದೆ
ಜೋತುಬೀಳುವ
ಮುದ್ದು ಪುಟಾಣಿ
ಗೂಡು ಕಟ್ಟುವ ಹಕ್ಕಿಯೂ
ಬಿಳಲುಗಳನ್ನು ಜೀಕಲು ಬಿಟ್ಟು
ಅವರಪಾಡಿಗೆ.
ಮರಗಟ್ಟುವ ಚಳಿಯಲ್ಲಿ,
ಬಿರು ಬೇಸಿಗೆಯಲ್ಲಿ
ಬೇರು ಸಡಿಲಿಸುವ ಮಳೆಯಲ್ಲಿ.
ಅಗಾಧವಾಗಿ ಹುದುಗಿ
ಕಾ೦ಡವಾಗಿ ಎನ್ನ
ಬಿರುಕುಗಳಲ್ಲಿ ಬಾವ ತು೦ಬುವ
ನಾನೆ೦ಬ ನಾನು
ಪ್ರೀತಿಸುವುದು ನಿನ್ನ!
ಹೀಗಿರಲು, ನನ್ನನ್ನೂ
ಯಾರನ್ನೂ
ಸದಾ ಪ್ರೀತಿಸದ
ಪ್ರೀತಿಮೇಲೇಕೆ
ನಮ್ಮ ಹುಚ್ಚು ಪ್ರೀತಿ.?

No comments: