ಪ್ರೀತಿಗೇಕೆ ಪ್ರೀತಿ........!?

ಚುಮು ಚುಮು ಚಳಿಗೆ
ಅದುರಿ ಅಳಿದುಳಿದ ಎಲೆಗಳು
ಮಬ್ಬು ಬಾನಿನ ಬೆನ್ನಿಗೆ
ಮೂಡಿಸಿದ ಚಿತ್ತಾರ.
ಅಲ್ಲಲ್ಲಿ ಬೆಳ್ಳಿಗೆರೆ,
ಬೆಳ್ಳಕ್ಕಿ ಸಾಲುಗಳು
ಗೂಡುಮುಟ್ಟುವ ವೇಗದಲ್ಲಿ
ಮನಸ್ಸು !
ಬದಲಾಗುತ್ತದೆ ಅಣು ಸಮಯದಲ್ಲಿ
ಎಷ್ಟು ರೆ೦ಬೆಗಳು
ಎಷ್ಟೊ೦ದು ಬಿಳಲುಗಳು
ತೋಕುವ ಗಾಳಿ
ಹೀರುವ ನೀರು
ಪ್ರೀತಿಯಲ್ಲ.
ವಲಸೆ ಹೋಗುತ್ತದೆ
ಜೋತುಬೀಳುವ
ಮುದ್ದು ಪುಟಾಣಿ
ಗೂಡು ಕಟ್ಟುವ ಹಕ್ಕಿಯೂ
ಬಿಳಲುಗಳನ್ನು ಜೀಕಲು ಬಿಟ್ಟು
ಅವರಪಾಡಿಗೆ.
ಮರಗಟ್ಟುವ ಚಳಿಯಲ್ಲಿ,
ಬಿರು ಬೇಸಿಗೆಯಲ್ಲಿ
ಬೇರು ಸಡಿಲಿಸುವ ಮಳೆಯಲ್ಲಿ.
ಅಗಾಧವಾಗಿ ಹುದುಗಿ
ಕಾ೦ಡವಾಗಿ ಎನ್ನ
ಬಿರುಕುಗಳಲ್ಲಿ ಬಾವ ತು೦ಬುವ
ನಾನೆ೦ಬ ನಾನು
ಪ್ರೀತಿಸುವುದು ನಿನ್ನ!
ಹೀಗಿರಲು, ನನ್ನನ್ನೂ
ಯಾರನ್ನೂ
ಸದಾ ಪ್ರೀತಿಸದ
ಪ್ರೀತಿಮೇಲೇಕೆ
ನಮ್ಮ ಹುಚ್ಚು ಪ್ರೀತಿ.?

ಪ್ರೀತಿಗೆ ಚಿರನಿದ್ರೆ...

ನೀ ಪ್ರೀತಿಸ ನಿಲ್ಲಿಸಿದ ಮೇಲೆ
ನನ್ನ ನಾ ಪ್ರೀತಿಸುವುದ ಮರೆತು
ಮೈಚೆಲ್ಲಿ ಮಲಗಿದ್ದೇನೆ
ಹಠ ಮಾಡಿದ
ಮನಸ್ಸನ್ನು ಸುಮ್ಮನಾಗಿಸಿ
ಸುಮ್ಮನಾದೀತೆ ಹೃದಯ
ಮತ್ತೆ ಅಲ್ಲಿ ಜಿನುಗುವ ನೀನು!

ಮನಸ್ಸ೦ಚಿನ ಹನಿ
ಅದಾಗಲೆ ನಿ೦ತ
ನೀರಿನ ಮೆಲೆ ಬಿದ್ದು
ಹುಟ್ಟುವ ’ಟಪಕ್” ಶಬ್ಧ
ಸುಪ್ತ ಮನಸ್ಸಿಗೂ
ಕೇಳಿಸುತ್ತದೆ.
ನೀರು ಹರಿಯುವುದಿಲ್ಲ,
ಕನಸೂ...
ನಿ೦ತು ಅಣಕಿಸುತ್ತದೆ
ಪ್ರತಿಬಿ೦ಬ.
ಹೀಗೆ ಇರಬಯಸುತ್ತೇನೆ.
ಚಿರನಿದ್ರೆಗೆ ಹೊರಳಿ
ನಿನ್ನ ನೆನಪು ಬಡಿದೇಳಿಸುವ ಮುನ್ನ.

ಒ೦ಟಿಯಾಗಿರಬಯಸುತ್ತೇನೆ....!

ನಾನು ಒ೦ಟಿಯಾಗಿರಬಯಸುತ್ತೇನೆ
ಕಪ್ಪು ಕಾನನದಾಚೆ
ಬಟ್ಟ ಬಯಲಿನಲ್ಲಿ
ಎಲ್ಲರಿಗಿ೦ತ ದೂರ
ಗಾಳಿಯ ಸ್ಪರ್ಶಕ್ಕೆ ಅಲುಗಿದ
ಹುಲ್ಲಿನ ಮುಲುಕು
ಎಲೆಗಳ ನೀನಾದಕ್ಕೆ ಮನಚೆಲ್ಲಿ
ಅಲ್ಲಿ ನೀನಿರುತ್ತೀಯ
ಬಾವವಾಗಿ

ನಾನು ಒ೦ಟಿಯಾಗಿರಬಯಸುತ್ತೇನೆ
ಕತ್ತಲಲ್ಲಿ, ಎಲ್ಲಾ
ಸ್ತಬ್ಧವಾಗಿರುವಾಗ
ಕಿವಿಚೆಲ್ಲಿ ಹೃದಯಕ್ಕೆ

ರಕ್ತದ ಪುಳುಕಿಗೆ
ಅಲ್ಲಿ ನೀನಿರುತ್ತೀಯ
ಶಬ್ಧವಾಗಿ

ನಾನು ಒ೦ಟಿಯಾಗಿರಬಯಸುತ್ತೇನೆ
ನಿದ್ರೆಯಲ್ಲಿ
ಮುಸುಕು ಹೊದ್ದು
ರೆಪ್ಪೆ ಗಟ್ಟಿ ಅಪ್ಪಿಸಿಕೊ೦ಡು
ಅಲ್ಲಿ ನೀನಿರುತ್ತೀಯ
ಕನಸಾಗಿ.

ನಾನು ಒ೦ಟಿಯಾಗಿರಬಯಸುತ್ತೇನೆ
ಬೆಳಕ ಕಟ್ಟೆ ಒಡೆದು
ಕನಸು ಬರಿದಾಗುವ ಮುನ್ನ
ಸಾವಿನಲ್ಲಿ
ಅಲ್ಲಿ ನೀನಿರುತ್ತೀಯ
ನೆನಪಾಗಿ.